ಆಂಬ್ಲಿಪೋಡ
ಪುರಾತನ ಕಾಲದ ಏಕಖುರ ಸಸ್ತನಿ. ಇದು ಪಾಂಟೊಲಾಂಬ್‍ಡ ಎನ್ನುವ ಕುರಿಯ ಪ್ರಮಾಣದ ಸಸ್ತನಿ; ಪೇಲಿಯೋಸೀನ್ ಕಾಲದಲ್ಲಿ ಮೊದಲು ಕಾಣಿಸಿಕೊಂಡ ಈ ಪ್ರಾಣಿಗೆ ಮೋಟುಗಾಲು ಮತ್ತು ಅಗಲವಾದ ಪಾದಗಳಿದ್ದುವು. ನಿಧಾನವಾದ ನಡಿಗೆಯ ಈ ಪ್ರಾಣಿಗೆ ದೊಡ್ಡ ಕೋರೆದಾಡೆಗಳೂ v- ಆಕಾರದ ಮೊನೆಗಳಿದ್ದ ತ್ರಿಕೋಣಾಕಾರದ ಮೇಲಿನ ದವಡೆ ಹಲ್ಲುಗಳೂ ಇದ್ದುವು.

   	ಪೇಲಿಯೊಸೀನ್ ಅಂತ್ಯದಲ್ಲಿ ಮತ್ತು ಪ್ರಾಚೀನ ಇಯೊಸೀಸ್ ಕಾಲದಲ್ಲಿ ಜೀವಿಸಿದ್ದ ಆಂಬ್ಲಿಪೋಡಗಳು ದೈತ್ಯಾಕಾರಿಗಳಾಗಿ ವಿಕಾರರೂಪಿನ ಏಕಖುರ ಸಸ್ತನಿಗಳಾಗಿದ್ದುವು. ಕಡೆಯ ಪೇಲಿಯೊಸೀನ್ ಕಾಲದಲ್ಲಿ ಸ್ಪರಾಟ್‍ಕೊಲ್ಯಾಂಬ್‍ಡ ಪಾಂಟೊಲ್ಯಾಂಬ್‍ಡವಿಗಿಂತ 2.5 ಯಷ್ಟು ದೊಡ್ಡದಾಗಿತ್ತು. ಬೇರನ್ನು ಕಿತ್ತು ತಿನ್ನುತ್ತಿದ್ದ ಪ್ರಾಣಿಯಾದುದರಿಂದ ಏಕಖುರ ಸಸ್ತನಿಗಳಲ್ಲಿಲ್ಲದ ಬಲವಾದ ಕೋರೆದಾಡೆಗಳೂ ಉಗುರುಳ್ಳ ಬೆರಳುಗಳೂ ಇದ್ದುವು. ಬೇರಿಲ್ಯಾಂಬ್‍ಡ 8 ಅಡಿ ಎತ್ತರವಿತ್ತು. ಇದಕ್ಕೆ ಅಗಲವಾದ ಶರೀರ, ಭಾರವಾದ ಕಾಲುಗಳು, ಬಾಲ, ಚಿಕ್ಕ ತಲೆಬುರುಡೆ ಮತ್ತು ಸಣ್ಣ ಕೋರೆದಾಡೆ ಇದ್ದುವು.

   	ಪ್ರಾಚೀನ ಇಯೊಸೀನ್ ಕಾಲದ ಕೋರಿಫೊಡಾನ್ ಎನ್ನುವ ಪ್ರಾಣಿಯ ವ್ಯಾಪ್ತಿ ಉತ್ತರ ಅಮೆರಿಕದಿಂದ ಯೂರೋಪಿನವರೆಗೂ ಇತ್ತು. ಇದು ಬೇರಿಲ್ಯಾಂಬ್‍ಡ ಪ್ರಮಾಣದಷ್ಟೇ ಇದ್ದರೂ ಅನೇಕ ವಿಧಗಳಲ್ಲಿ ಅದಕ್ಕಿಂತ ಬೇರೆಯಾಗಿತ್ತು. ಇದರ ಶರೀರ ಅತಿ ಉದ್ದ. ಬಾಲ ಸಣ್ಣ. ಮುಸುಡಿ ಅಗಲ, ತಲೆಬುರುಡೆ ದೊಡ್ಡದು. 44 ಹಲ್ಲುಗಳಿದ್ದುವು. ಕೋರೆಹಲ್ಲುಗಳು ಉದ್ದವಾಗಿದ್ದುವು. ದವಡೆಯಲ್ಲಿ ಸ್ವಲ್ಪ ಸ್ಥಳ ಬಿಟ್ಟು ಮೃದುವಾದ ಆಹಾರವನ್ನು ತಿನ್ನಲು ಅನುಕೂಲವಾದ ತ್ರಿಕೋಣಾಕಾರದ ದವಡೆ ಹಲ್ಲುಗಳಿದ್ದುವು. ಕಾಲಿನ ಮೂಳೆಗಳು ಒಂದೇ ನೇರದಲ್ಲಿ ಅಳವಡಿಸಲ್ಪಟ್ಟಿದ್ದುವು. ದೇಹದ ಭಾರವನ್ನು ಹೊರಲನುಕೂಲವಾಗುವ ಬಲವಾದ ಮೋಟು ಕಾಲ್ಬೆರಳುಗಳಿದ್ದುವು.  ಆದರೆ ಈ ಗುಂಪಿಗೆ ಸೇರಿದ ಇತರ ಪ್ರಾಣಿಗಳಲ್ಲಿ ವ್ಯತ್ಯಾಸವಿತ್ತು. ಕೋರಿಫೊಡಾನ್‍ಗೆ ಟ್ಯಾಪೀರ್ ಮಾದರಿ ಗೊರಸುಗಳಿದ್ದರೆ ಇದರ ಸಂಬಂಧಿ ಟೈಟನಡಾಯಸ್‍ಗೆ ನೆಲ ಅಗೆಯುವ ಉಗುರುಗಳಿದ್ದುವು. ಉತ್ತರ ಅಮೆರಿಕದ ಆಂಬ್ಲಿಪೋಡಗಳಲ್ಲಿ ಇದೇ ಕೊನೆಯದು. ಆದರೆ ಏಷ್ಯ ಖಂಡದಲ್ಲಿ ಕೊರಿಫೊಡಾನ್‍ಗೆ ಅತಿ ಸಮೀಪ ಸಂಬಂಧಿಗಳಾದ ಪ್ರಾಣಿಗಳು ಇಯೊಸೀನ್ ಮತ್ತು ಆಲಿಗೊಸೀನ್ ಕಾಲದಲ್ಲಿ ವಾಸಿಸುತ್ತಿದ್ದುವು. ಮಧ್ಯ ಆಲಿಗೊಸೀನ್ ಯುಗದಲ್ಲಿ ಈ ಪ್ರಾಣಿಗಳು ಸಂಪೂರ್ಣ ನಾಶವಾದುವು.

   	ಉತ್ತರ ಅಮೆರಿಕದ ಆಂಬ್ಲಿಪೋಡ ಆದಿಕಾಲದ ಐದು ಬೆರಳುಗಳಿದ್ದು ಸಣ್ಣ ಏಕಪಾದದ ಗೊರಸುಳ್ಳ ಸಸ್ತನಿ. ಪೆರಿಟೈಕಸ್ ಮತ್ತು ಪ್ಯಾಂಟೊಲಾಂಬ್‍ಡ ಎರಡೂ ಒಂದೇ ಕುಟುಂಬಕ್ಕೆ ಸೇರಿದವು. ಎರಡಕ್ಕೂ 44 ಹಲ್ಲುಗಳಿದ್ದುವು. ಆದರೆ ಮೇಲಿನ ದವಡೆಗಳ ಆಕಾರ ವ್ಯತ್ಯಾಸವಾಗಿತ್ತು. ಪಾಂಟೊಡಾಂಟದಲ್ಲಿ ಪಾಂಟೊಲಾಂಬ್‍ಡಿಡೆ ಬೇರಿಲಾಂಬ್‍ಡಿಡೆ ಮತ್ತು ಕೋರಿಫೊಡಾಂಟಿಡೆ ಕುಟುಂಬಗಳು ಸೇರಿವೆ. ಪಾಂಟೊಲಾಂಬ್‍ಡ ಪೇಲಿಯೊಸೀನ್ ಕಾಲದಲ್ಲಿ ಜೀವಿಸಿದ್ದ ಪ್ರಾಣಿ. ಇದೇ ಕೋರಿಫೊಡಾನ್‍ದ ಉಗಮಕ್ಕೆ ಮೂಲಜೀವಿ.

ಇನ್ಯಾಟೊತೇರಿಯಂ ಎನ್ನುವ ಇಯೊಸೀನ್ ಕಾಲದ ಪ್ರಾಣಿ. ಇದನ್ನು ಕೆಲವರು ಟಿಮೊಸೆರಸ್ ಇನ್ಯಾಟ ಎಂದು ಬೇರ್ಪಡಿಸಿದ್ದಾರೆ. ಇದಕ್ಕೆ ಐದು ಬೆರಳುಗಳುಳ್ಳ ಕುಳ್ಳ ದಪ್ಪ ಕಂಬದಂಥ ಕಾಲುಗಳಿದ್ದುವು. ಕಿರಿದಾದ ತಲೆಯೂ ಅತಿ ಚಿಕ್ಕ ಮೆದುಳೂ ನೀಳವಾದ ಮುಖವೂ ಇದ್ದುವು. ಅತಿ ದೊಡ್ಡ ಖಡ್ಗಮೃಗದಷ್ಟು ದೊಡ್ಡದಾದ ಅದರ ಶರೀರಕ್ಕೆ ಅದರ ಮಿದುಳು ಏನೇನೂ ಸಾಲದು. ತಲೆಯ ಮೇಲೆ ಮೂರು ಚಿಕ್ಕ ಕೊಂಬುಗಳಿದ್ದುವು. ಹಿಂಭಾಗದ ಕೊಂಬು ಬೇರೆ ಕೊಂಬುಗಳಿಗಿಂತ ದೊಡ್ಡದಾಗಿತ್ತು. ಬಾಯಲ್ಲಿ 44 ಹಲ್ಲುಗಳಿದ್ದುವು. ಮೇಲಿನ ಕೋರೆದಾಡೆಗಳು ಉದ್ದವಾದ ಕತ್ತಿಯಂತೆ ಆಯುಧೋಪಾದಿಯಲ್ಲಿದ್ದುವು. ಅವುಗಳನ್ನು ಮುಚ್ಚುವುದಕ್ಕೆ ಎರಡು ಕೆಳದವಡೆಯಲ್ಲೂ ಮಾಂಸದ ಹೊದಿಕೆಯಿತ್ತು.

ಪಾಂಟೊಡಾಂಟ ಮತ್ತು ಡೈನೊಸೆರಾಟ ಜಾತಿಗೆ ಸೇರಿದ ಪ್ರಾಣಿಗಳನ್ನು ಕೆಲವು ವೇಳೆ ಆಂಬ್ಲಿಪೋಡದ ಗುಂಪಿಗೆ ಸೇರಿಸುವುದುಂಟು. ಆದರೆ ಅವೆರಡು ವರ್ಗಗಳ ಪ್ರಾಣಿಗಳ ಹಲ್ಲಿನ ರಚನೆಯಲ್ಲಿ ವ್ಯತ್ಯಾಸವಿರುವುದರಿಂದ ಅವುಗಳನ್ನು ಬೇರೆ ಮಾಡಲಾಗಿದೆ. ಎರಡೂ ಕಾಂಡೈಲಾರ್ಥಸ್ ಬುಡಕಟ್ಟಿನಿಂದ ಬಂದಿದ್ದರೂ ಕಾಲು ಮತ್ತು ಹಲ್ಲುಗಳ ಆಕಾರ ವ್ಯತ್ಯಾಸದಿಂದ ಅವನ್ನು ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಿದೆ.

ಡೈನೊಸೆರಾಟ ಭಾರವುಳ್ಳ ಮೋಟುಗಾಲಿನ ದೈತ್ಯಾಕಾರದ ಪ್ರಾಣಿ. ತಲೆಯ ಮೇಲೆ ಮೂರು ಜೊತೆಯ ಕೊಂಬುಗಳಿದ್ದುವು. ಮೇಲಿನ ದವಡೆ ಹಲ್ಲುಗಳು ಕೋರಿಫೊಡಾನ್ ರೀತಿಯಲ್ಲಿದ್ದರೂ ಮಧ್ಯದಲ್ಲಿ ಎರಡು ಕಟ್ಟೆಗಳಿದ್ದುವು. ಇಯೊಸೀನ್ ಯುಗದ ಕಡೆಯ ದಿನಗಳಲ್ಲಿ ಡೈನೊಸೆರಾಟಗಳ ವಂಶ ಅಳಿದುಹೋಯಿತು. 							
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ